-ಕೃಷ್ಣ.ದೇವಾಂಗಮಠ.

ಮಾಯದ ತಂಬೂರಿ ಹಿಡಿದು
ದಿನವೂ ಹೆಬ್ಬಾಗಿಲಿಗೆ ಬರುವ
ಜಗವ ತಿರುಗುವ ತಿರುಕ
ಮೀಟುವನು ತಂತಿ,
ಹೊರಹೊಮ್ಮುವವು ಮಿಂಚುಹುಳುಗಳು
ಬದುಕಿನ ಬುಡಕ್ಕೆ ಹತ್ತಿದ ಗೆದ್ದಲು
ಉದುರಿಸಿದರೆ ಮಣ್ಣು ಬಳಬಳ ಸುರಿಯುವವು
ಬುಚುಬುಚು ಹುಳುಗಳ ರಾಶಿ

ಭೂಮಿ ಒಸರಿದ ಕೆಂಡದೆಂಜಲ ನುಂಗಿ
ಹಕ್ಕಿ ನಭಕ್ಕೆ ನೆಗೆದಿದೆ
ಉಗುಳಿದೆ ಬೆಂಕಿ, ಜೀವಕುಲ
ಕಿರುಬೆರಳ ಆಸರೆಗೆ ಬಾಯ್ತೆರೆಯುವಲ್ಲಿ
ಜಗನ್ಮಾತೆ ಮೈಯೆಲ್ಲಾ ಮೊಲೆ
ಮೂಡಿಸಿಕೊಂಡು ಅಮೃತವೀಯುವಳು

ಕಾಡಹಾದಿಯಂಥ ಹಾವಿಗೆ
ಗಾಳಿಯಂಥವನೊಬ್ಬ ಪುಂಗಿಯೂದಿ
ಹೆಡೆಯಾಡಿಸುವ ಬುಸ್ ಎಂದರೆ
ಒಡಲ ಕೂಸುಗಳು ತಮಟೆ
ಹರಿದುಕೊಂಡು ರಕ್ತ ಕಾರುವವು
ಆಗ ಅವಳೆದೆಯ ಸೀಳು ಜಲಪಾಲ

ಎಲೆ ತಿನ್ನುವ ಸಸ್ಯಾಹಾರಿ ಕೀಟ
ಮಾಂಸದ ರುಚಿ ಹತ್ತಿ ಮೆದುಳ ಮೇಯ್ದಿದೆ
ದೇವರಿಗೆ ಗರ ಬಡಿದಿದ್ದ ತಿಳಿದ ಮಾಂತ್ರಿಕರು
ಭೂತ ಬಿಡಿಸಲು ಪರದಾಡಿ ಹೆನಗಾಡಿ
ಮಂತ್ರದಂಡಕ್ಕಾಗಿ ಯಾರಲ್ಲಿ
ಬೇಡುವುದೆನ್ನುವುದೇ ತಿಳಿಯದೆ
ತಳಮಳಗೊಂಡು ಭೂತಾರಾಧಕರಾಗಿಬಿಡುವರೇನೋ

ಈಸೋಪನ ನೀತಿ ಕಥೆಗಳ ನಾಯಕರು
ನೀತಿಗೆಟ್ಟವರಾಗಿ ದ್ರೋಹಗೈಯ್ಯುತ್ತಿದ್ದರೆ
ಕಥೆಯ ಪಾತ್ರವೇ ಅಲ್ಲದ ದಿಗಂಬರಿ
ಜಗದೆಲ್ಲ ಗಂಡರ ಹೆಂಡತಿ
ಹಾದರದವಳೊಬ್ಬಳು ನಿಗಿನಿಗಿ ಕೆಂಡದಂಥ
ಲಿಂಗದೇವರನ್ನು ಅಂತರಾತ್ಮದಲ್ಲಿಟ್ಟುಕೊಂಡು
ನಿತ್ಯ ಸೀತೆಯಾಗುವಳು ದೇಹವೆಂಬ ಕಲ್ಮಷ ಉರಿಸಿ

 

 

(ಚಿತ್ರ ಸೆಲೆ;prajavani.net)